ಕದಂಬ ಶಿಲೆ : ನೀರಿನ ಸೆಳವಿನಲ್ಲಿ ಬಲುದೂರ ಕೊಚ್ಚಿಕೊಂಡು ಹೋಗಿ ತಿಕ್ಕಾಟದಿಂದ ಸರಿಸುಮಾರು ಗುಂಡಗಿನ ಆಕಾರ ಪಡೆದ, 2 ಮಿಮೀ ಗಿಂತ ಹೆಚ್ಚಿನ ವ್ಯಾಸವಿರುವ, ಕಲ್ಲುಗಳು ಒಂದುಗೂಡಿ ಆಗಿರುವ ಸಮುದಾಯ (ಕಂಗ್ಲಾಮೆರೆಟ್). ಬಿಡಿಗಲ್ಲುಗಳು ಚೂಪಾಗಿಯೂ ಗಾತ್ರ 10-100 ಮಿಮೀವರೆಗೂ ಇರುವ ಸಮುದಾಯದ ಹೆಸರು ಬ್ರೆಚ್ಚ (ಃಡಿeಛಿಛಿiಚಿ). ಮಳೆಗಾಲದಲ್ಲಿ ನೀರಿನ ಪ್ರವಾಹ ಹಲವಾರು ಭಿನ್ನ ಗಾತ್ರಗಳ ಕಲ್ಲುಗಳನ್ನು ಕೊಚ್ಚಿಕೊಂಡು ಸಾಗುತ್ತದೆ. ನೀರಿನ ಆಳ, ಪ್ರವಾಹದ ಸೆಳೆತ, ಕಲ್ಲಿನ ಗಾತ್ರ ಇವನ್ನು ಅವಲಂಬಿಸಿ ಒಂದೊಂದು ಗಾತ್ರದ ಕಲ್ಲು ಒಂದೊಂದು ಕಡೆ ಶೇಖರಿತವಾಗುವುದು. ದಪ್ಪಕಲ್ಲುಗಳು ದಡದಲ್ಲಿಯೂ ಮರಳಿನ ಕಣಗಳು ಕೊಂಚ ದೂರ ಸರಿದ ಮೇಲೆಯೂ ನಿಕ್ಷೇಪಿತವಾಗುತ್ತವೆ. ಕಿರಿಯ ಮಣ್ಣಿನ ಕಣಗಳು ಮತ್ತು ರಾಸಾಯನಿಕ ವಸ್ತುಗಳು ಆಳವಾದ ನೀರಿನಲ್ಲಿ ನಿಧಾನವಾಗಿ ಸಂಚಿತವಾಗುವುವು. ಕಾಲಕ್ರಮೇಣ ಇವುಗಳ ಸಂದುಗಳಲ್ಲಿ ಮಣ್ಣು, ಮರಳು, ಸುಣ್ಣದಕಲ್ಲು ಕಬ್ಬಿಣದ ಆಕ್ಸೈಡುಗಳೇ ಮೊದಲಾದ ಖನಿಜಗಳಿರುವ ಲೇಪ, ಗಾರೆ ಮುಂತಾದ ಬಂಧಕವಸ್ತುಗಳು ಸೇರಿ ಕದಂಬ ಶಿಲೆ ಉಂಟಾಗುತ್ತದೆ.

ಸಂಚಿತ ಬಿಡಿಕಲ್ಲುಗಳ ಗಾತ್ರಾನುಸಾರ ಕದಂಬ ಶಿಲೆಯನ್ನು ವರ್ಗೀಕರಿಸುವುದುಂಟು-ಮಣಿ (ಪೆವಲ್) ಆಥವಾ ಸೂಕ್ಷ್ಮ ಕದಂಬಶಿಲೆ, ಗುಂಡು (ಕಾಬಲ್) ಅಥವಾ ಮಧ್ಯಮ ಕದಂಬಶಿಲೆ ಮತ್ತು ಬಂಡೆ (ಬೌಲ್ಡರ್) ಅಥವಾ ಒರಟು ಕದಂಬ ಶಿಲೆ. ಇವೆಲ್ಲ ವರ್ಗಗಳ ನಡುವೆಯೂ ಸಾಮಾನ್ಯವಾಗಿ ಬೆರೆತು ಎರಕಗೊಳ್ಳುವ ಸೂಕ್ಷ್ಮ ಮರಳುಕಣಗಳು ಇವುಗಳಲ್ಲಿ ಇನ್ನಷ್ಟು ಪ್ರಭೇದಗಳನ್ನು ಉಂಟು ಮಾಡುವುವು.
ಸಂಸ್ತರ ಶಿಲೆಗಳನ್ನು (ಸ್ಟ್ರಾಟಿಫೈಡ್ ರಾಕ್ಸ್‌) ಭೂ ಚರಿತ್ರೆಯ ಪುಟಗಳೆಂದು ಕರೆಯುವುದು ವಾಡಿಕೆ. ಇವುಗಳ ಅಡಿಯಲ್ಲಿ ಸಾಮಾನ್ಯವಾಗಿ ಗೋಚರವಾಗುವ ಕದಂಬ ಶಿಲೆಗಳು ಕಡಲತಡಿಯನ್ನೂ ಭೂ ಸಾಮೀಪ್ಯವನ್ನೂ ಸೂಚಿಸುತ್ತವೆ. ಆಳವಾದ ನೀರಿನಲ್ಲಿ ಉತ್ಪನ್ನವಾದ ಶಿಲೆಗಳ ಸಮೀಪದಲ್ಲಿ ಇವು ಸಿಕ್ಕಿದರೆ ಭಾರೀ ಚಲನವಲನಗಳು ಆ ಪ್ರದೇಶದ ಮೇಲ್ಮೈಯಲ್ಲಿ ಆಗಿರುವುವೆಂದು ತಿಳಿಯಬಹುದು. ಕದಂಬಶಿಲೆಯಲ್ಲಿರುವ ಕಣಗಳ ಸೂಕ್ಷ್ಮ ಪರಿಶೀಲನೆಯಿಂದ ಅವು ಎಲ್ಲಿಂದ ಬಂದವೆಂಬುದನ್ನೂ ಪ್ರಾಚೀನ ಕಾಲದ ನದೀವೇಗವನ್ನೂ ವಾಯುಗುಣವನ್ನೂ ನಿರ್ಧರಿಸಬಹುದು. ಭೂ ಚರಿತ್ರೆಯ ದಾಖಲೆ ಪರಿಪುರ್ಣವಾಗಿಲ್ಲ. ಸಂಸ್ತರ ಶಿಲಾನಿಕ್ಷೇಪ ಸತತವಾಗಿ ಮುಂದುವರಿದಿದ್ದರೂ ಒಂದೆಡೆ ಅವೆಲ್ಲವೂ ಗೋಚರವಾಗಿಲ್ಲ. ಕದಂಬ ಶಿಲೆಗಳು ಸೂಚಿಸುವ ಅನುರೂಪತೆಗಳ ಆಧಾರದಿಂದ ಭೂ ಚರಿತ್ರೆಯ ವಿಭಾಗಗಳನ್ನೂ ಮಾಡಲಾಗಿದೆ. ಹೀಗೆ ಭೂಮಂಡಲದ ಇತಿಹಾಸ ನಿರೂಪಣೆಯಲ್ಲಿ ಕದಂಬಶಿಲೆಗಳಿಗೆ ಪ್ರಧಾನ ಸ್ಥಾನ ಉಂಟು.     (ಎ.ಎನ್.ಎಸ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ